ಕುಶೀನಗರ
ಉತ್ತರ ಪ್ರದೇಶದ ಗೋರಖ್‍ಪುರ ಜಿಲ್ಲೆಯಲ್ಲಿ ಘಂಡಕೀ ನದೀದಡದ ಮೇಲಿರುವ ಪ್ರಸಿದ್ಧ ಬೌದ್ಧಕ್ಷೇತ್ರ. ಈಗ ಕಾಸಿಯಾ ಎಂದು ಹೆಸರಾಗಿರುವ ಕುಶೀನಗರಕ್ಕೆ ಕುಶಿನಾರಾ ಎಂಬ ಹೆಸರೂ ಬಳಕೆಯಲ್ಲಿತ್ತು. ಇದು ಇತಿಹಾಸ ಪ್ರಾರಂಭಯುಗದಲ್ಲಿ ಮಹಾಸುದ್ಸಸನನ ರಾಜಧಾನಿಯಾಗಿದ್ದ ಕುಶಾವತಿಯ ಪಾಳು ನಿವೇಶನದ ಮೇಲೆ ನಿರ್ಮಿತವಾಗಿ ಕ್ರಿ.ಪೂ. 7-6ನೆಯ ಶತಮಾನಗಳಲ್ಲಿ ಮಲ್ಲ ವಂಶದವರ ರಾಜಧಾನಿಯಾಗಿತ್ತು. ಗೌತಮಬುದ್ಧ ಕ್ರಿ.ಪೂ. 486ರಲ್ಲಿ ತನ್ನ 80ನೆಯ ವಯಸ್ಸಿನಲ್ಲಿ ಮಹಾನಿರ್ವಾಣ ಪಡೆದ ಸ್ಥಳವಾದ್ದರಿಂದ ಇದು ಬೌದ್ಧರ ಪವಿತ್ರ ಕ್ಷೇತ್ರಗಳಲ್ಲೊಂದಾಗಿದೆ. ಇಲ್ಲಿ ಅಶೋಕನಿಂದ ನಿರ್ಮಿತವಾದುದೆಂದು ಹೇಳಲ್ಪಡುವ ಪರಿನಿರ್ವಾಣಚೈತ್ಯ ಬೆಳಕಿಗೆ ಬಂದಿಲ್ಲ. ಗುಪ್ತಕಾಲದ ಪರಿನಿರ್ವಾಣಚೈತ್ಯವಲ್ಲದೆ 'ಮಾತಾಕುನ್ವರ್ ಕಾ ಕೋಟ್ ಎಂಬ ಮಂದಿರದಲ್ಲಿರುವ ಬುದ್ಧನ ಪರಿನಿರ್ವಾಣಮೂರ್ತಿಯೂ ಈಗಿವೆ. ರಾಮಾಭಾರ್ ಎಂಬ ದಿಬ್ಬದಡಿಯಲ್ಲಿ ಬಹುಶಃ ಬುದ್ಧನಮರಣಾನಂತರ ಆತನ ದೇಹವನ್ನು ದಹಿಸಿ ಅಸ್ಥಿಗಳನ್ನು ಎಂಟು ಭಾಗಗಳನ್ನಾಗಿ ಹಂಚಿದೆಡೆಯಲ್ಲಿ ನಿರ್ಮಿತವಾದ ಸ್ತೂಪದ ಅವಶೇಷಗಳಿರಬಹುದು. 7ನೆಯ ಶತಮಾನದ ಮಧ್ಯಭಾಗದಲ್ಲಿ ಚೀನೀ ಯಾತ್ರಿಕ ಹ್ಯುಎನ್‍ತ್ಸಾಂಗ್ ಸಂದರ್ಶಿಸಿದಾಗ ಕುಶೀನಗರ ಪಾಳುಬಿದ್ದಿದ್ದುದಾಗಿ ಹೇಳಿದ್ದಾನೆ.
(ಬಿ.ಕೆ.ಜಿ.; ಜಿ.ಆರ್.ಆರ್.; ಸಿ.ಜಿ.ಪಿ.; ಡಿ.ಎಂ.ಜಿ.ಒ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ